ಸ್ವಾಗತ

ಆತ್ಮೀಯ ಸ್ಮರಣೆ ಗೆಳೆಯರಿಗೆ ಹಾರ್ದಿಕ ಸ್ವಾಗತ!

ಕನ್ನಡ ಸಾಹಿತ್ಯ-ಸಂಸ್ಕೃತಿಯನ್ನು ಸ್ಮರಿಸುವ ಉದ್ದೇಶ ಹೊಂದಿರುವ ಅರಿಜೊನ ಕನ್ನಡ ಮಿತ್ರರ ಗುಂಪು, ಶ್ರೀ ಪ್ರಕಾಶ್ ಜೋಷಿ ಯವರ ನೇತೃತ್ವದಲ್ಲಿ ಕಳೆದ ವರ್ಷದಿಂದ ಸ್ಮರಣೆ ಕಾರ್ಯಕ್ರಮ ಆರಂಭಿಸಿರುವುದು ಸರಿಯಷ್ಟೇ. ಪ್ರತಿ ತಿಂಗಳ ಮೂರನೇ ಶನಿವಾರ ಮಧ್ಯಾಹ್ನ ಒಟ್ಟುಗೂಡಿ, ಅಗಾಧ ಕನ್ನಡ ಸಾಹಿತ್ಯ - ಕೃತಿ, ಕರ್ತೃ, ವಿಶೇಷಗಳನ್ನು ಮೆಲುಕು ಹಾಕುವ ವಿಚಾರ ಮಂಟಪವಾಗಿ ಪ್ರಾರಂಭವಾಗಿರುವ "ಸ್ಮರಣೆ" ಕಾರ್ಯಕ್ರಮವು, ಇದುವರಗೆ - ಮಂಕುತಿಮ್ಮನ ಕಗ್ಗ, ದಾಸ ಸಾಹಿತ್ಯ, ವಚನ ಸಾಹಿತ್ಯ, ಬಾಲ್ಯದ ಮೆಚ್ಚಿನ ಪದ್ಯಗಳು, ಕನ್ನಡ ಲೇಖಕಿಯರು - ಮುಂತಾದ ವಿಷಯಗಳ ಬಗ್ಗೆ ಚರ್ಚಿಸಿದೆ.

ಪ್ರತಿ ಕ್ರಾರ್ಯಕ್ರಮದಲ್ಲೂ ನಾವು ಹಂಚಿಕೊಳ್ಳುವ ಹಲವಾರು ವಿಷಯಗಳು ಕೇವಲ ಕಾರ್ಯಕ್ರಮದಲ್ಲಿ ಭಾಗವಹಿಸುವ ಜನರಿಗೆ ಹಾಗು ಆ ಕ್ಷಣಗಳಿಗೆ ಮಾತ್ರ ಸೀಮಿತವಾಗದೆ, ಅದನ್ನು ಇತರ ಕನ್ನಡ ಮಿತ್ರರ ಜೊತೆ ಹಂಚಿಕೊಳ್ಳುವ ಉದ್ದೇಶದಿಂದ ಈ ಬ್ಲಾಗ್ ನ್ನು ಆರಂಭಿಸಲಾಗಿದೆ.

ಕನ್ನಡ ಮಿತ್ರರ ಮನದ ಮಾತುಗಳನ್ನು ಹಂಚಿಕೊಳ್ಳುವ ತಾಣವಾಗಿ ಇದು ಹೊರಹೊಮ್ಮುವುದೆಂಬ ಆಶಯದೊಂದಿಗೆ,

ಪ್ರದೀಪ್

Sunday, March 4, 2012

ಕನ್ನಡ ಸಿನಿಮಾ ಸಾಹಿತ್ಯ


ಶ್ರೀ ಮತ್ತು ಶ್ರೀಮತಿ ಗಿರಿಜಾ ಕೃಷ್ಣಮೂರ್ತಿಯವರ ಆಮಂತ್ರಣದ ಮೇರೆಗೆ, ಅವರ ಮನೆಯಲ್ಲಿ ಆಚರಿಸಿದ ಈ ವರ್ಷದ ಮೊದಲ ಸ್ಮರಣೆ ಕಾರ್ಯಕ್ರಮಕ್ಕೆ ಸುಮಾರು 50ಕ್ಕೊ ಹೆಚ್ಚಿನ ಸಂಖ್ಯೆಯಲ್ಲಿ ಜನ ಭಾಗವಹಿಸಿದ್ದು ವಿಶೇಷ. 'ಕನ್ನಡ ಸಿನಿಮಾ ಸಾಹಿತ್ಯ' ಎಂಬ ವಿಷಯದ ಆಸಕ್ತಿಯಿಂದ ಜನ ಹೆಚ್ಚಿನ ಪ್ರತಿಕ್ರಿಯೆ ತೋರಿದ್ದಾರೆಂದು ಸಂತೋಷಿಸಿದರು ಶ್ರೀ ಪ್ರಕಾಶ್ ಜೋಶಿಯವರು. ಅದಕ್ಕೂ ಮಿಗಿಲಾಗಿ 'ಸ್ಥಳ ಮಹಿಮೆ' ಎಂಬುದು ನನ್ನ ಅನಿಸಿಕೆ.

ಕಾರ್ಯಕ್ರಮ ಶ್ರೀಮತಿ ವಾಣಿ ವಿಕ್ರಂ ಅವರ ಸುಶ್ರಾವ್ಯ ಗಾಯನದಲ್ಲಿ ಆರಂಭ. 'ಯಾವ ಜನ್ಮದ ಮೈತ್ರಿ..' ಹಾಡು ಔಚಿತ್ಯಪೂರ್ಣವಾಗಿತ್ತು. ನಂತರ ಮೈಸೂರ್ ಸುರೇಶ ಅವರು 'ಇಂದು ಎನಗೆ ಗೋವಿಂದ..' ಚಿತ್ರಗೀತೆ ಹಾಡಿದರು. ಕಾರ್ಯಕ್ರಮ ಚಿತ್ರಗಳ ಕುರಿತೇ ಆದರೂ, ಚಲನಚಿತ್ರಕ್ಕೂ ವಿಶೇಷವೆನಿಸುವ ರೀತಿಯಲ್ಲಿ ಮೂರು ಹಾಡುಗಳಿಂದ ಆರಂಭ. ಮೂರನೇ ಹಾಡು ಯಾವುದಂತೀರಿ? ಚಿ.ಉದಯಶಂಕರ್ ಅವರ ಚಿರಂತನ ಗೀತೆಗಳಲ್ಲಿ ಒಂದಾದ ಅಣ್ಣಾವ್ರ ಧ್ವನಿಯಲ್ಲಿ ಹೊರಬಂದ 'ಜೇನಿನ ಹೊಳೆಯೋ.. ಹಾಲಿನ ಮಳೆಯೋ..'. ಅಭಿಮಾನಿಗಳು ಶಿಳ್ಳೆ ಹೊಡೆದು ಸಂತೋಷ ವ್ಯಕ್ತ ಪಡಿಸಿದರು.

'ಕನ್ನಡ ಸಾಹಿತ್ಯ ಹಾಗು ಚಿತ್ರರಂಗದ ನಂಟು' ವಿಷಯದೊಂದಿಗೆ ಆರಂಭಿಸಿದ ಪ್ರದೀಪ್, ಕನ್ನಡ ಚಿತ್ರರಂಗದ ಆರಂಭದಿಂದ ಸಾಹಿತ್ಯ ಪ್ರಕಾರಗಳು - ಹೆಸರಾಂತ ನಾಟಕ, ಕಾದಂಬರಿ, ಕವನ - ಹೇಗೆ ಹಾಸುಹೊಕ್ಕಾಗಿದೆ ಎಂಬುದರ ಬಗ್ಗೆ ವಿವರಿಸಿದರು. ಚಿತ್ರ ಸಾಹಿತ್ಯದ ಬಗ್ಗೆ ಒಂದು ಪಕ್ಷಿನೋಟ ಹರಿಸಿ, ಜನ ಮನದಲ್ಲಿ ಸದಾ ಹಸಿರಾಗಿ ಉಳಿದಿರುವ ಸಾಹಿತ್ಯಾಧಾರಿತ ಚಲನಚಿತ್ರ ಹಾಗು ಗೀತೆಗಳನ್ನು ನೆನಪಿಸಿಕೊಂಡರು.

ನಂತರ ಮಾತನಾಡಿದ ಮಹೇಶ್, ಒಬ್ಬ ಅಭಿಮಾನಿಯ ದೃಷ್ಟಿಕೋನವನ್ನು ತೆರೆದಿಡುತ್ತಾ, ಜನಪ್ರಿಯ ಹಂಸಲೇಖರವರ ಚಿತ್ರಸಾಹಿತ್ಯ ಕುರಿತು ತಮ್ಮ ಅನಿಸಿಕೆಗಳನ್ನು ವಿಶೇಷ ರೀತಿಯಲ್ಲಿ - ಪ್ರೇಮಲೋಕ. ರಣಧೀರ ಮುಂತಾದ ಚಿತ್ರಗಳಿಂದ ಡೈಲಾಗ್, ಹಾಡು ಎಳೆ-ಎಳೆ ಯಾಗಿ ಬಿಡಿಸಿ ಎಲ್ಲರ ಮನ ರಂಜಿಸಿದರು. ಇದು ಎಷ್ಟು ಚೆನ್ನಾಗಿತ್ತೆಂದೆರೆ - ನೋಡಿರುವವರು, ನೋಡದವರು 'ಪ್ರೇಮಲೋಕ'ವನ್ನು ಹುಡುಕಿ ವೀಕ್ಷಿಸುವುದರಲ್ಲಿ ಸಂಶಯವಿಲ್ಲ. ನನ್ನ ಪಕ್ಕ ಕುಳಿತ ಮೈಸೂರ್ ಸುರೇಶರವರು - 'ಯಾವ ಪಿಕ್ಚರ್ ರೀ ಅದು' ಎಂದು ಕೇಳಿದ್ದು ವಿಶೇಷವಲ್ಲ, ಆದರೆ ಆ ಚಿತ್ರದ ಎಲ್ಲ ಹಾಡುಗಳು ಹೆಚ್ಚು ಕಮ್ಮಿ ಕಂಠಪಾಠ ಆಗಿರುವ ನಾನೇ ಆ ಪಿಕ್ಚರ್ ಇನ್ನು ನೋಡಿಲ್ಲ ಎನ್ನುವುದು ಆಶ್ಚರ್ಯವೇನೋ.

ಅದಾದ ನಂತರ ಚಿತ್ರ ಸಾಹಿತ್ಯ ಬೆಳೆದು ಬಂದ ಬಗೆ ಕುರಿತು ಮಾತನಾಡಿದ ಪುನೀತ್, ಅಚ್ಚುಕಟ್ಟಾದ ರೀತಿಯಲ್ಲಿ ಅದನ್ನು ನಿರೂಪಿಸಿ, ಹುಣುಸೂರು ಕೃಷ್ಣಮೂರ್ತಿಯವರಿಂದ ಹಿಡಿದು ಯೋಗರಾಜ್ ಭಟ್ ರವರಗೆ, ಪ್ರತಿ ಪೀಳಿಗೆಯ ವಿಶೇಷತೆ ಕುರಿತು ಮಾತನಾಡಿ ಮಾಹಿತಿ ನೀಡಿದರು.

ಕಾದಂಬರಿಗಳನ್ನು ಆಧರಿಸಿದ ಕನ್ನಡ ಚಿತ್ರಗಳ ಕುರಿತು ಮತ್ತಷ್ಟು ಮಾಹಿತಿ ನೀಡಿದ ವಿದ್ಯಾ ಅವರು ಎಲ್ಲರೂ ಈ ಚಿತ್ರಗಳನ್ನು ನೆನಪಿಸುವಂತೆ ಮಾಡಿದ್ದು ಪ್ರಶಂಸನೀಯ. ಈ ನಡುವೆ ಕೆಲವು ವಿಷಯಗಳ ಕುರಿತು ಚರ್ಚೆಗೂ ಅವಕಾಶವಾಯಿತು. 'ಕಾಡು ಕುದುರೆ ಓಡಿ ಬಂದಿತ್ತಾ..' ಹಾಡು 'ಕಾಕನ ಕೋಟೆ'ಯದೋ ಇಲ್ಲಾ 'ಕಾಡು ಕುದುರೆ' ಚಿತ್ರದ್ದೋ ಎಂಬ ಸಂದೇಹ ಮೂಡಿದಾಗ, ವಿದ್ಯಾ ಅವರು ಸೇರಿದಂತೆ ಬಹು ಮಂದಿ 'ಕಾಕನ ಕೋಟೆ' ಚಿತ್ರ ಇರಬೇಕು ಎಂದು  ಅಂದುಕೊಳ್ಳುವಾಗ, ಜೋಷಿಯವರು ಅದು 'ಕಾಡು ಕುದುರೆ' ಚಿತ್ರದ್ದೇ ಎಂದು ಗಟ್ಟಿಯಾಗಿ ಹೇಳಿದರು. ಸರಿ, ಸಂದೇಹ ನಿವಾರಿಸಿಬಿಡುವ ಅಂತ ನಾನು ಪರಿಶೀಲಿಸಿ ನೋಡಿದಾಗ ಜೋಷಿಯವರು ಹೇಳಿದ್ದು ನಿಜ ಎಂದು ತೀರ್ಮಾನವಾಯಿತು. ಶಿವಮೊಗ್ಗ ಸುಬ್ಬಣ್ಣ ಹಾಡಿದ ಈ ಗೀತೆ, ರಾಷ್ಟ್ರ ಪ್ರಶಸ್ತಿ ಪಡೆದ ಮೊದಲ ಚಿತ್ರ ಗೀತೆ ಅಂತಲೂ ತಿಳಿದು ಬಂತು. Chemistry, biology ಯಲ್ಲಿ doubts ಇರಬಹುದು, ಆದರೆ ಈ ಸಿನಿಮಾ ವಿಷಯಗಳಲ್ಲಿ ನನಗೆ doubt ಇಲ್ಲಾ ಅಂತ declare ಮಾಡಿದರು ಖುಷಿಯಾದ ಜೋಷಿಯವರು.

ನಂತರ, ಅರ್.ಎನ್.ಜಯಗೋಪಾಲ್ ರವರ ಬಗ್ಗೆ ಮಾತನಾಡಿದ ಪವಮಾನ, ಚಿರಸ್ಮರಣೀಯ ಗೀತೆಗಳನ್ನು ನೆನಪಿಸಿದರು
ನಾನು ಬಳ್ಳಿಯ ಮಿಂಚು...
ನೀ ಬಂದು ನಿಂತಾಗ.. ನಿಂತು ನೀ ನಕ್ಕಾಗ..
ನಿನ್ನ ಕಣ್ಣ ಕನ್ನಡಿಯಲ್ಲಿ ಕಂಡೆ ನನ್ನ ರೂಪ..
 ಬರೆದೆ ನೀನು ನಿನ್ನ ಹೆಸರ ನನ್ನ ಬಾಳ ಪುಟದಲಿ..
ಇದೇ ನನ್ನ ಉತ್ತರ, ಕೊಡುವೆ ಬಾರೆ ಹತ್ತಿರ..
ಬೆಳ್ಳಿ ಮೋಡದ ಅಂಚಿನಿಂದ..
ಸುಖದ ಸ್ವಪ್ನ ಗಾನ..
ಹೂವೂ ಚೆಲುವೆಲ್ಲಾ ನಂದೆಂದಿತು..
- ಎಣಿಕೆಗೆ ಸಿಗದಂತೆ ಮುಂದುವರೆಯುವ ಅನೇಕ ಮಧುರ ಗೀತೆಗಳನ್ನು ನೀಡಿದ ಜಯಗೋಪಾಲ್ ಅವರ ಜೀವನ-ಕೃತಿ-ಕಾರ್ಯ ಬಗ್ಗೆ ವಿವರಗಳನ್ನು ಹಂಚಿಕೊಂಡರು.


ಎಲ್ಲಿದ್ದೆ ಇಲ್ಲೀತಂಕ ಎಲ್ಲಿಂದ ಬಂದ್ಯವ್ವ ..
ಕೆಂಪಾದವೊ ಎಲ್ಲ ಕೆಂಪಾದವೊ..
ಇವೇ ಮೊದಲಾದ ಜನಪ್ರಿಯ ಹಾಡುಗಳನ್ನು ಬರೆದ ಪಿ.ಲಂಕೇಶ್ ಅವರ ಸಾಹಿತ್ಯವನ್ನು ಮಂಜುರವರು ಸೊಗಸಾಗಿ ಹಾಡಿ ರಂಜಿಸಿದರು.

'ನನ್ನ ಮೆಚ್ಚಿನ ಕಲಾತ್ಮಕ ಚಿತ್ರಗೀತೆಗಳು' ವಿಷಯದ ಬಗ್ಗೆ ಮಾತನಾಡಿದ ಪ್ರಸಾದ್ ಸಾಮಕ್ ತಮ್ಮ ಅನಿಸಿಕೆಯೊಂದಿಗೆ ಹಲವಾರು ಚಿತ್ರಗಳನ್ನೂ ಗೀತೆಗಳನ್ನೂ ನೆನಪಿಸಿ, ವಿವರಗಳನ್ನು ಹಂಚಿಕೊಂಡರು.

ತದನಂತರ 'ಗೀತ ಪ್ರಿಯ' ಅವರ ಕೃತಿ-ಜೀವನದ ಬಗ್ಗೆ ಜೋಷಿಯವರು ಮಾತನಾಡಿ, ಅನೇಕ ವಿವರಗಳನ್ನು ಹಂಚಿಕೊಂಡರು. ಗೀತಪ್ರಿಯ ರಚನೆಯ 'ಬೆಸುಗೆ' ಹಾಡಿನಲ್ಲಿ 'ಬೆಸುಗೆ' ಪದ 61 ಬಾರಿ ಬರುತ್ತದೆ ಎಂದು ಅನಂತ್ ರವರು ಹೇಳಿದ್ದು, ಗೀತಪ್ರಿಯರ ಗೀತೆಗಳ ಜನಪ್ರಿಯತೆಗೆ ಸಾಕ್ಷಿ. ಗೀತಪ್ರಿಯ ಹಾಡುಗಳನ್ನು ನೆನಪಿಸಿಕೊಳ್ಳುವಾಗ ವಿಶೇಷ ಅತಿಥಿಗಳಲ್ಲಿ ಒಬ್ಬರಾದ ಹೇಮಂತ್ ಅವರು ದನಿಗೂಡಿಸಿ ಹಾಡುಗಳ ಮೆರಗು ಹೆಚ್ಚಿಸಿದರು. ವಿಷಮಿಸಿರುವ  ಗೀತಪ್ರಿಯ ಅವರ ಆರೋಗ್ಯ ಸ್ಥಿತಿಯನ್ನು ತಿಳಿಸಿ, ಕನ್ನಡ ಸಂಘ ಮೊದಲಾದಂತೆ ಕನ್ನಡಿಗರು-ಚಿತ್ರ ಪ್ರೇಮಿಗಳು ಧನ ಸಹಾಯಕ್ಕೆ ಮುಂದಾಗಬೇಕೆಂದು ವಿನಂತಿಸಿಕೊಂಡರು. ತತ್ ಕ್ಷಣವೇ ಸಾಹಯಕ್ಕೆ ಮುಂದಾದ ಹೇಮಂತ್ 20 ಸಾವಿರದ ಧನ ಸಹಾಯ ಘೋಷಿಸಿದರು. ಇದಕ್ಕೆ ಸಂಬಂಧಿಸಿದಂತೆ ಸಹಾಯ ಮಾಡಬಯಸುವರು ಹೆಚ್ಚಿನ ವಿವರಗಳಿಗೆ ಜೋಷಿಯವರನ್ನು ಸಂಪರ್ಕಿಸಿ.


ಈ ಮಧ್ಯೆ, ಗಿರಿಜಾ ಹಾಗು ಅತಿಥಿಗಳಾಗಿ ಆಗಮಿಸಿದ್ದ ಅವರ ಸಹೋದರರು, ಸಿನಿಮಾ ಜೊತೆ ತಮ್ಮ ಕುಟುಂಬದ ನಂಟನ್ನು ಹಾಗು ರಾಜೇಂದ್ರ ಸಿಂಗ್ ಬಾಬು ಸೇರಿದಂತೆ ಹಲವಾರು ಸಿನಿ ವ್ಯಕ್ತಿಗಳ ಒಡನಾಟವನ್ನು ನೆನಪಿನ ಲೋಕಕ್ಕೆ ಜಾರಿ ಹಂಚಿಕೊಂಡರು.


ಸ್ಮರಣೆಯ ಕೂಟದ ಈ ವಿಶೇಷ ವಾತಾವರಣದಿಂದ ಉತ್ತೇಜಿತರಾದ ವಿಕ್ರಂ ಅಣ್ಣಾವ್ರ ಅಭಿಮಾನಿಯೆಂದು ತೋರ್ಪಡಿಸಿ 'ಮಾನವನಾಗುವೆಯಾ ಇಲ್ಲಾ ದಾನವನಾಗುವೆಯಾ..' ಹಾಡನ್ನು ಸೇರಿದಂತೆ ಎರಡು ಗೀತೆಗಳನ್ನು ಹಾಡಿ ರಂಜಿಸಿದರು. ಜೊತೆಗೆ ತಮ್ಮ ಮದುವೆಗೆ ಮುನ್ನ ನಡೆದ 'ವರ ಪರೀಕ್ಷೆ' ಪ್ರಸಂಗವನ್ನು ಹಂಚಿಕೊಂಡರು.

ಸಮಯ ಹೋಗಿದ್ದೇ ಗೊತ್ತಿಲ್ಲ, ಆದರೆ ಅಡುಗೆ ಮನೆ ಕಡೆ ಜನ ಹೆಚ್ಚಿಗೆ ಸೇರಿದ್ದರಿಂದ ಚಡಪಡಿಕೆ ಶುರು. ಜೋಷಿಯವರು ಸ್ಮರಣೆ ಪರವಾಗಿ ಎಲ್ಲರಿಗೂ ವಂದನೆಗಳನ್ನು ಸಲ್ಲಿಸಿ, ಸ್ಮರಣೆ ಕಾರ್ಯಕ್ರಮದ ಆಗು-ಹೋಗುಗಳನ್ನೂ ವಿವರಿಸಿ, ಇದೇ ರೀತಿಯಲ್ಲಿ ಸ್ಮರಣೆ ಕಾರ್ಯಕ್ರಮಗಳಿಗೆ ಸ್ನೇಹಿತರೆಲ್ಲರೂ ಬಂದು ಪ್ರೋತ್ಸಾಹಿಸಬೇಕೆಂದು ವಿನಂತಿಸಿದರು. ಸ್ಮರಣೆಯ ಉದ್ದೇಶವನ್ನು ನೆನಪಿಸಿ, ಕನ್ನಡ ಸಂಘ ಸೇರಿದಂತೆ ಎಲ್ಲರ ನೆರವು ಅಗತ್ಯ, ಜೊತೆಗೆ ಸ್ಮರಣೆ ಸುಸೂತ್ರವಾಗಿ ನಡೆಯಲು ಯಾವುದೇ ಅಭಿಪ್ರಾಯ, ಅನಿಸಿಕೆಗಳಿಗೆ ಸ್ವಾಗತವಿದೆ ಎಂದು ತಿಳಿಸಿದರು.

ಕೊನೆಯಲ್ಲಿ ಮಾತನಾಡಿದ ಕ್ರಿಶ್ ರವರು, ತಮ್ಮ ಎಂದಿನ ಕಚಗುಳಿಯಿಡುವ ಶೈಲಿಯಲ್ಲಿ - ತಾವು pure kannada ಮಾತ್ರ ಮಾತನಾಡುವುದು ಎಂದು ತಿಳಿಸಿ, ಚಿಕ್ಕಂದಿನಲ್ಲಿ 'ಸಿನಿಮಾ ನೋಡಿ ಹಾಳಾಗಿ ಹೋಗ್ತಿಯ!' ಅಂತ ಹಿರಿಯರು ಹೇಳಿದ್ರೂ, ಶಾಲೆ-ಕಾಲೇಜುಗಳಲ್ಲಿ ಕಲಿಯದ, ಆದರೆ ಜೀವನಕ್ಕೆ ಅಗತ್ಯ ಅರಿವು, ಮೌಲ್ಯ ಮುಂತಾದ ವಿಷಯಗಳನ್ನು ಈ ಮೂಲಕ ಕಲಿಯಲು ಸಾಧ್ಯ ಎಂಬ ಅನುಭವದ ಮಾತುಗಳನ್ನು ಹಂಚಿಕೊಂಡರು. ಕಾರ್ಯಕ್ರಮ ಸೊಗಸಾಗಿ ನಡೆದ ಬಗ್ಗೆ ತಮ್ಮ ಸಂತೋಷ ವ್ಯಕ್ತಪಡಿಸಿ, ಸಿನಿಮಾ ಸಾಹಿತ್ಯ ಬೆಳವಣಿಗೆ ಹಾಗು ಈಗಿನ ಚಿತ್ರ-ಗೀತೆಗಳ ಸ್ವರೂಪ ನೋಡಿ ('ಶಿವ ಅಂತ ಹೋಗುತ್ತಿದ್ದೆ ರೋಡಿನಲ್ಲಿ..' ಇವೇ ಮುಂತಾದ ಹಾಡುಗಳು) ತಮ್ಮಲ್ಲಿ ಸಿನಿಮಾ ಕವಿಯಾಗುವ 'ಆಶಾ ಕಿರಣ' ಮೂಡಿಸಿದೆಯೆಂದು ತಿಳಿಸಿ, ಆಗಮಿಸಿದ ಎಲ್ಲರಿಗೂ ಧನ್ಯವಾದಗಳು, ಜೊತೆಗೆ ಇಷ್ಟು ಚೆನ್ನಾಗಿ ನಡೆಯುವದಕ್ಕೆ ಕಾರಣರಾದ ಆಯೋಜಕಿ, 'ಯಜಮಾನತಿ' ಗಿರಿಜಾರವರಿಗೆ ವಿಶೇಷ ಧನ್ಯವಾದಗಳನ್ನು ಅರ್ಪಿಸಿದರು. ಇದರಲ್ಲಿ ಎಳ್ಳಷ್ಟೂ ಉತ್ಪ್ರೇಕ್ಷೆಯಿಲ್ಲ ಅನ್ನುವುದು ಸರಿಯಷ್ಟೇ.

ಯಾವುದೇ ಕಾರ್ಯಕ್ರಮ ಸಂಪೂರ್ಣ ಯಶಸ್ವಿಯಾಗಲು ಬರೇ ಮನರಂಜನೆಯೊಂದೇ ಸಾಲದು, ಇಲ್ಲೂ ಅಷ್ಟೇ - ಕ್ಯಾರೆಟ್  ಸೂಪ್ ಯಿಂದ ಹಿಡಿದು, ಪುಳಿಯೋಗರೆ, ಮೊಸರನ್ನ, ಒಬ್ಬಟ್ಟು ಮೊದಲಾದ ಖಾದ್ಯ ತಿನಿಸುಗಳ ಸಾಲು ಎಲ್ಲರ ತೃಪ್ತಿಗೆ ಕಾರಣವಾಗಿತ್ತು.ಕ್ರಿಶ್ ರವರು ಲಘು-ಉಪಾಹಾರ ಎಂದು ತಿಳಿಸಿದ್ದರೂ, ಅದನ್ನು ಲಘುವಾಗಿ ಪರಿಗಣಿಸಿ, ಊಟದಷ್ಟೇ ಉಂಡಿದ್ದೆವು ಎಂದು ಖಾಲಿಯಾದ ಪಾತ್ರೆಗಳು ಘೋಷಿಸಿದ್ದವು! 'ಅನ್ನಪೂರ್ಣೆ'ಯರಿಗೆ ನಮ್ಮೆಲ್ಲರ ಧನ್ಯವಾದಗಳು.

ಸಿನಿಮಾ, ಅದರಲ್ಲೂ ಮುಖ್ಯವಾಗಿ ಚಿತ್ರಗೀತೆಗಳಿಗೆ ಪ್ರತಿಯೊಬ್ಬರ ಮನದಲ್ಲೂ ಒಂದು ವಿಶೇಷ ಸ್ಥಾನವಿದೆ. ನಮ್ಮಲ್ಲಿನ ಭಾವನೆಗಳಿಗೆ ಪೂರಕವಾಗಿ ಒಂದು ಭಾಷೆಯನ್ನು ಕೊಡುವ ಶಕ್ತಿ ಅದಕ್ಕಿದೆ. ಪ್ರೀತಿ, ಮಮತೆ, ವಿರಹ, ವ್ಯಥೆ, ಉಲ್ಲಾಸ  ಮುಂತಾದ ಭಾವನೆಗಳಿಗೆ ದನಿಗೂಡಿಸಿ ಎಲ್ಲರಿಗೂ ತಮ್ಮದೇ ಈ ಹಾಡು ಎಂದು ಅನ್ನಿಸುವ ಮಟ್ಟಿಗೆ ಆಪ್ತತೆ ಚಿತ್ರಗೀತೆಗಳು ತರುತ್ತವೆ. 'ಹಾಡು ಹಳೆಯದಾದರೇನು, ಭಾವ ನವನವೀನ' ಎಂದಂತೆ ಇವತ್ತಿನ ಸ್ಮರಣೆ ಕಾರ್ಯಕ್ರಮ ಹಳೆಯದನ್ನು ಮೆಲಕು ಹಾಕುವುದರಲ್ಲಿ ಹೊಸತನವೊಂದನ್ನು ತಂದು, ಅವಿಸ್ಮರಣೀಯ ಆಗಿಸಿದ್ದು ನಿಸ್ಸಂಶಯ!

ವಿಷಯ ಸಂಬಂಧಿತ ಇತರೆ ಮಾಹಿತಿ-ಲೇಖನಗಳು

Sunday, January 29, 2012

ಸುಮ್ನೆ ತಲೆ ತಿನ್ನೋಕೆ...

೧.  ಈಗ ಅಸ್ತಿತ್ವದಲ್ಲಿ ಇಲ್ಲದಿರುವ ಬೆಂಗಳೂರಿನ ಈ ಥಿಯೇಟರಗಳು, ಜನ ಸಾಮಾನ್ಯರ ದೃಷ್ಟಿಯಲ್ಲಿ ಇನ್ನೂ ಕಣ್ಮರೆಯಾಗಿಲ್ಲ. ಬಸ್ ನಿಲ್ದಾಣ ಅಥವಾ ವಿಳಾಸ ತಿಳಿಸಲು ಇಂದಿಗೂ ಹೆಸರಿಸಲ್ಪಡುವ ಬೆಂಗಳೂರಿನ ಈ ಥಿಯೇಟರಗಳನ್ನು ಹೆಸರಿಸಿ.
೨. "ಹೊಂಬಿಸಿಲು" ಚಲನಚಿತ್ರದ ಹಾಡಿನ ಹೊರತಾಗಿ, "ಹೊಂಬಿಸಿಲು" ಪದ ಇರುವ ಕನ್ನಡ ಚಿತ್ರ ಗೀತೆ (ಗಳು)ಯನ್ನು ಹೆಸರಿಸಿ
೩. ಗ್ರೀಕ್ ಗೂ, ಕರ್ನಾಟಕಕ್ಕೂ ಸಂಬಂಧ ತಳಕು ಹಾಕಿರುವ ಗ್ರೀಕ್ ನಾಟಕ ಯಾವುದು? ಸಂಬಂಧದ ವಿಶೇಷತೆಯನ್ನು ತಿಳಿಸಿ.
೪. ಕುವೆಂಪು ಮೊದಲು ಬರೆದದ್ದೆಲ್ಲಾ ಇಂಗ್ಲೀಷ್-ನಲ್ಲಿ. ಅವರಿಗೆ ಕನ್ನಡದಲ್ಲಿ ಬರೆಯಲು ಪ್ರೇರೇಪಿಸಿದ್ದು ಯಾರು?
೫. ಯೆಂಡ, ಯೆಡ್ತಿ ಹೋದ್ರೂ ಕನ್ನಡ ಬಿಡಂಗಿಲ್ಲ ಅಂದ ರತ್ನನ ಹೆಂಡ್ತಿ ಯಾರು?
೬. ಗೆಳತಿಯ ಗಂಡನನ್ನು ಮೂದಲಿಸುವ ಇಬ್ಬರು ಹೆಂಗಸರ ವಾದವೇ ಪುರಂದರ ದಾಸರ ಈ ಕೀರ್ತನೆ. ಪಾಪ! ವಿಷ್ಣು ಮತ್ತು ಶಿವ - ಆ ಗಂಡದಿರು. ಯಾವುದೀ ಕೀರ್ತನೆ? 
೭. ಒಗಟುಗಳು 
     ಅ. ಅಂಗಿ ಬಿಚ್ಚಿ ಬಾವಿಗೆ ಹಾರು
     ಆ. ನೀರಲ್ಲಿ ಹುಟ್ಟಿ ನೀರಲ್ಲಿ ಕರಗುವೆನು. ನಾನ್ಯಾರು?
೮. ಬೆಂಗಳೂರಿನ ಮೊದಲ ಮಹಿಳಾ ಪೋಲಿಸ್ ಸ್ಟೇಷನ್ ಆರಂಭವಾದದ್ದು ಎಲ್ಲಿ?
೯. ಬೆಂಗಳೂರು ರೇಡಿಯೋ ನವರು ಮಾತಿಗೊಮ್ಮೆ "ಸಕ್ಕತ್ ಹಾಟ್ ಮಗಾ" ಅಂತಾರೆ ಯಾಕೆ?
೧೦. ಜನಪ್ರಿಯ ಸಂಗೀತ ನಿರ್ದೇಶಕ "ಹಂಸಲೇಖ" ಅವರ ನಿಜ ಹೆಸರು ಏನು?

Saturday, January 21, 2012

ಪುನೀತ್ - ಒಂದು ಹಾಸ್ಯಮಯ ಆದರೂ ಸ್ವಾರಸ್ಯಕರವಾದ ಲೇಖನ !!

ಒಂದು ಹಾಸ್ಯಮಯ ಆದರೂ ಸ್ವಾರಸ್ಯಕರವಾದ ಲೇಖನ !!


ಪುನೀತ್ 

ಕನ್ನಡ ಕಾದಂಬರಿ ಮತ್ತು ಪುಸ್ತಕಗಳು


ಕನ್ನಡ ಪುಸ್ತಕ ಪ್ರೀತಿಯುಳ್ಳ ಮಿತ್ರರೆಲ್ಲರಿಗೂ... ಇಲ್ಲಿದೆ ಕನ್ನಡ ಕಾದಂಬರಿ ಹಾಗು ಪುಸ್ತಕಗಳು! ಓದಿ ಆನಂದಿಸಿ!

Please note that links below point to other web sites and contact respective web sites for any questions related to the content.

MK ಇಂದಿರಾ ಕಾದಂಬರಿಗಳು

ಬಿದಿಗೆ ಚಂದ್ರಮ ಡೊಂಕು - MK ಇಂದಿರಾ
ಮುಕ್ತ ಅವರ ಕಾದಂಬರಿಗಳು

ರೇಖಾ ಖಾಖoಡಕಿ ಅವರ ಕಾದಂಬರಿಗಳು 




ಜ್ಯೋತ್ಸ್ನಾ ಕಾಮತ್ 
"ಹೀಗಿದ್ದೇವೆ ನಾವು"  (ಲಲಿತ ಪ್ರಬಂಧಗಳು )

ಅನುಸೂಯ ಸಂಪತ್ ಅವರ ಕಾದಂಬರಿಗಳು 




ಹಾ ಮಾ ನಾಯಕ ಅವರ ಪುಸ್ತಕಗಳು 



ಹಾವು ಮತ್ತು ಹೆಣ್ಣು ( ಕಥಾ ಸಂಗ್ರಹ)

ಚದುರಂಗ 

ತ ರಾ ಸು ಅವರ ಪುಸ್ತಕಗಳು

ಹಿಂತಿರುಗಿ ನೋಡಿದಾಗ (ತ ರಾ ಸು ಅವರ ಜೀವನ ಚರಿತ್ರೆ )




ನೃಪತುಂಗ


ಜಿ ಪಿ ರಾಜರತ್ನಂ ಅವರ ಪುಸ್ತಕಗಳು 




SL ಭೈರಪ್ಪ
K P ಪೂರ್ಣಚಂದ್ರ ತೇಜಸ್ವಿ ಅವರ ಪುಸ್ತಕಗಳು

ಶಿವರಾಮು 
ಡಾ ಶಿವರಾಂ ಕಾರಂತ ಅವರ ಪುಸ್ತಕಗಳು 



















ಮಾಸ್ತಿ 
"ಚೆನ್ನಬಸವನಾಯಕ " ಕಾದಂಬರಿ (26 MB)




ಯಂಡಮೂರಿ ವೀರೇಂದ್ರನಾಥ್ ನೋವೆಲ್ಸ್ 



ಸುದರ್ಶನ ದೇಸಾಯಿ ಅವರ ಕಾದಂಬರಿಗಳು
  1)Airavata_tif.pdf
  2)Amar Deepa_tif.pdf  
  3)Badavana maneya Manikya_tif.pdf  
  4)Benkiya Madilalli_tif.pdf  
  5)Chinnada Beralu_tif.pdf
  6)Mruthyu Bandhan_tif.pdf 
  7)Seelu Nalige_tif.pdf  
  8)Sheetal Koli_tif.pdf  
  9)Vichitra Aparadhi_tif.pdf  
  10)Visha Manthan_tif.pdf  
  11)Yamadootaru_tif.pdf 

Tuesday, January 17, 2012

ಸಂಕ್ರಾಂತಿ ಪ್ರಾರ್ಥನೆ!

ಎಲ್ಲರಿಗು ಸಂಕ್ರಾಂತಿಯ ಶುಭಾಶಯಗಳು.
ಪ್ರದೀಪನ 'ಸಂ' ಕ್ರಾಂತಿ ಬಹಳ ಚೆನ್ನಾಗಿದೆ.
 
ಸ್ಪೂರ್ತಿಯಿಂದ ನನ್ನದೊಂದು ಪ್ರಾರ್ಥನೆ!.
 
++++++++++++++++++++++
ಬೆಳಗಾಯಿತೇಳಣ್ಣ ವೆಂಕಟರಮಣ
ಇಗೊ ಮತ್ತೆ ಬಂದಿದೆ ಮಕರ ಸಂಕ್ರಮಣ
 
ತಲೆಕೆಟ್ಟು ಸೂರ್ಯ ದಿಕ್ಕು ಬದಲಿಸಿದನಂತೆ 
ಮತ್ತದೇ ಊರ್ದ್ವ ಗಮನ ಅದೇ ಉತ್ತರಾಯಣ. 
 
ಪಾಪ ಅವನೇನು ಮಾಡುವನು ಸಕಲ ಗ್ರಹ ಬಲ ನೀನು
ಗ್ರಹಗಳಿಗೂ ಗ್ರಹಚಾರ ಕೊಡುವವನು ನೀನು
 
ಸೂರ್ಯನಿಗೆ ಮೀಸ್ಸಲ್ಲ ನಿನ್ನ ಈ ಪುಂಡಾಟ
ಭೂಮಿಗೂ ತಂದೆ ಸುಗ್ಗಿ ಹುಗ್ಗಿಯ ಕೂಟ
 
ಎಳ್ಳಿಗೂ ಬೆಲ್ಲಕೂ ಕೊಬ್ಬರಿಯ ಸಾಂಕರ್ಯ
ಚಪ್ಪರಿಸೋ ಬಾಯಿಗೆ ರುಚಿಯ ಕೈಂಕರ್ಯ 
 
ಬರಿದೆ ಬದುಕಿರುವವರಿಗಲ್ಲ ಈ ಸಂಕ್ರಮಣ ಉತ್ಕ್ರಮಣ
ಸತ್ತವರಿಗೂ ಉಂಟು ಸಾಂತ್ವನ ತಿಲ ತರ್ಪಣ
 
ಭಾರತೀಯನು ನಾನು ವಿಶ್ವಮಾನವನು
ವಲಸಿಗನು ನಾನು ಉರಿಜೊನದವನು
 
ಬೆಂಬಿಡದ ಬೇತಾಳ ಹಿಂಬಾಲಿಸಿದೆ ನೀನು
ಕೂಡಿಸಿದೆ ಸ್ನೇಹಿಗಳ ಮಾಡಿಸಿದೆ ಸ್ಮರಣೆಗಳ
 
ವಿಸ್ಮರಣ ಶೀಲನಿಗೆ ಸ್ಮರಣ ಶಕ್ತಿ
ಸ್ಮರಣೆಯ ಮಿತ್ರರಿಂ ಸ್ಫೂರ್ತಿ ಶಕ್ತಿ
 
ಬೆಳೆಸು ಬಳಗದ ಶಕ್ತಿ ಬೆಳಗು ಬಳಗದ ಯುಕ್ತಿ
ಪಡುವಣದಿ ಮೂಡಿಸೋ ಕನ್ನಡದ ಭಕ್ತಿ
 
ಅಡಿಗಡಿಗೆ ಇರಲಣ್ಣ ಈ ನಿನ್ನ ಕರುಣಾ
ಮರೆಯದೆ ನಡೆಸಣ್ಣ  ಟೆಂಪಿ ವೆಂಕಟಕೃಷ್ಣ
 
ಬೆಳಗಾಯಿತೇಳಣ್ಣ ವೆಂಕಟರಮಣ
ಇಗೊ ಮತ್ತೆ ಬಂದಿದೆ ಮಕರ ಸಂಕ್ರಮಣ
 
 
-ಪವಮಾನ

ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು!

ಹೊಸ ವರ್ಷದ ಹೊಸಿಲು ತುಳಿದು
ಮತ್ತೊಮ್ಮೆ ಬಂದಿದೆ ಸಂಕ್ರಾಂತಿ

ಈ ಬಾರಿಯಾದರೂ ಮಾಡೇ ಬಿಡುವಾ
some ಕ್ರಾಂತಿ ಎಂದೆನಿಸಿದೆ

ಸಂಭ್ರಮದ ಸುಗ್ಗಿ ಇಂದು
ಬಾಸುಮತಿ ಹುಗ್ಗಿ ತಿಂದು
ಐ.ಟಿ. ರೈತನಾದ ನಾನು
ಹಿತ್ತಲಲ್ಲಿ ಕೊತ್ತಂಬರಿ ಸೊಪ್ಪು
ಬೆಳೆದು ಬಿಡಲೇ?

ಹಿಮಾಲಯವನೇರಿದ ತೇನಸಿಂಗನೇ
ಸ್ಪೂರ್ತಿಯೆನಗೆ
ಕಾರು ಪಕ್ಕಕ್ಕಿಟ್ಟು
ಕಾಲ್ನಡಿಗೆಯಲ್ಲೇ
south mountain
ಏರಿ ಬಿಡಲೇ?

ಕ್ರಾಂತಿಕಾರಿ ಐಡಿಯಾಗಳು
ಹಲವಾರು
ಏನು ಮಾಡಿದರೇನು
ಭವ ಹಿಂಗದು
ದಾಸ ನಾನು
ಮಗನ ಮುಖಮಾರ್ಜನ
ಮನೆಯ ಒಪ್ಪ-ಓರಣ
ಮಾಡುವರೆಗೆ ಎಷ್ಟೇ ಹಿಗ್ಗಿದರೂ
ಹುಗ್ಗಿಯ ದರ್ಶನವಿಲ್ಲ

ಚಳಿ ಅಂತ ಸೂರ್ಯನೇ
ಬರ್ತಾನೆ ಲೇಟಾಗಿ
ಎದ್ದು ಮಾಡೋದೇನಿದೆ ಈಗ
ಅಂದ್ಳು ಹೆಂಡ್ತಿ ಲೈಟಾಗಿ
ಸಂಕ್ರಾಂತಿಯ  ಕಾಂತಿ
ತಂದ ಈ ಮೆಸೇಜ್ ನಿಂದ 
ಈಗ ಎಲ್ಲ ಕ್ಲಿಯರ್
ಓಂ ಶಾಂತಿ.. ಶಾಂತಿ.. ಶಾಂತಿ!

ಪ್ರದೀಪ್ 

Welcome!

ಆತ್ಮೀಯ ಸ್ಮರಣೆ ಗೆಳೆಯರಿಗೆ ಹಾರ್ದಿಕ ಸ್ವಾಗತ! 

ಕನ್ನಡ ಸಾಹಿತ್ಯ-ಸಂಸ್ಕೃತಿಯನ್ನು ಸ್ಮರಿಸುವ ಉದ್ದೇಶ ಹೊಂದಿರುವ ಅರಿಜೊನ ಕನ್ನಡ ಮಿತ್ರರ ಗುಂಪು, ಶ್ರೀ ಪ್ರಕಾಶ್ ಜೋಷಿ ಯವರ ನೇತೃತ್ವದಲ್ಲಿ ಕಳೆದ ವರ್ಷದಿಂದ ಸ್ಮರಣೆ ಕಾರ್ಯಕ್ರಮ ಆರಂಭಿಸಿರುವುದು ಸರಿಯಷ್ಟೇ. ಪ್ರತಿ ತಿಂಗಳ ಮೂರನೇ ಶನಿವಾರ ಮಧ್ಯಾಹ್ನ ಒಟ್ಟುಗೂಡಿ, ಅಗಾಧ ಕನ್ನಡ ಸಾಹಿತ್ಯ - ಕೃತಿ, ಕರ್ತೃ, ವಿಶೇಷಗಳನ್ನು ಮೆಲುಕು ಹಾಕುವ ವಿಚಾರ ಮಂಟಪವಾಗಿ ಪ್ರಾರಂಭವಾಗಿರುವ "ಸ್ಮರಣೆ" ಕಾರ್ಯಕ್ರಮವು, ಇದುವರಗೆ - ಮಂಕುತಿಮ್ಮನ ಕಗ್ಗ, ದಾಸ ಸಾಹಿತ್ಯ,  ವಚನ ಸಾಹಿತ್ಯ, ಬಾಲ್ಯದ ಮೆಚ್ಚಿನ ಪದ್ಯಗಳು, ಕನ್ನಡ ಲೇಖಕಿಯರು - ಮುಂತಾದ ವಿಷಯಗಳ ಬಗ್ಗೆ ಚರ್ಚಿಸಿದೆ.

ಪ್ರತಿ ಕ್ರಾರ್ಯಕ್ರಮದಲ್ಲೂ ನಾವು ಹಂಚಿಕೊಳ್ಳುವ ಹಲವಾರು ವಿಷಯಗಳು ಕೇವಲ ಕಾರ್ಯಕ್ರಮದಲ್ಲಿ ಭಾಗವಹಿಸುವ ಜನರಿಗೆ ಹಾಗು ಆ ಕ್ಷಣಗಳಿಗೆ ಮಾತ್ರ ಸೀಮಿತವಾಗದೆ, ಅದನ್ನು ಇತರ ಕನ್ನಡ ಮಿತ್ರರ ಜೊತೆ ಹಂಚಿಕೊಳ್ಳುವ ಉದ್ದೇಶದಿಂದ ಈ ಬ್ಲಾಗ್ ನ್ನು ಆರಂಭಿಸಲಾಗಿದೆ. ಈ ಬ್ಲಾಗ್ ಸ್ಮರಣೆ ಮಿತ್ರರೆಲ್ಲರಿಗೂ ಸೇರಿದ್ದು. 

ಕನ್ನಡ ಮಿತ್ರರ ಮನದ ಮಾತುಗಳನ್ನು ಹಂಚಿಕೊಳ್ಳುವ ತಾಣವಾಗಿ ಇದು ಹೊರಹೊಮ್ಮುವುದೆಂಬ ಆಶಯದೊಂದಿಗೆ,
ಪ್ರದೀಪ್
 



 

.